ಅಜೋಲ
	ಫರ್ನ್ ಅಥವಾ ಜರೀಗಿಡದ ಜಾತಿಗೆ ಸೇರಿದ್ದು. ನೀರಿನಲ್ಲಿ ತೇಲಿಕೊಂಡು ಬೆಳೆಯುವ ಅತಿ ಸಣ್ಣ ಗಾತ್ರದ ಸಸ್ಯ. ಇದು ಸಾಲ್ವೀನಿಯೇಸಿ ಎಂಬ ಕುಟುಂಬಕ್ಕೆ ಸೇರಿದೆ. ಉಷ್ಣವಲಯ ವಾಯುಗುಣದಲ್ಲಿ ಬೆಳೆಯುವುದು ಹೆಚ್ಚು. ಇದರ ಗಾತ್ರ ಕೆಲವು ಸೆಂಟಿಮೀಟರ್‍ಗಳು ಮಾತ್ರ. ಕಾಂಡ ಮೃದುವಾಗಿ, ಚಪ್ಪಟೆಯಾಗಿ, ಸಣ್ಣ ಕವಲುಗಳಿಂದ ಕೂಡಿರುತ್ತದೆ. ಕಾಂಡದ ಎರಡೂ ಕಡೆ ಸಣ್ಣ ಎಲೆಗಳಿರುತ್ತವೆ. ಪ್ರತಿ ಎಲೆಯಲ್ಲಿ ಎರಡು ಹೋಳುಗಳಿರುತ್ತವೆ. ಮೇಲ್ಭಾಗದ ಹೋಳಿನ ಹರಿತ್ತಿರುವ ಜೀವಕೋಶಗಳು ದ್ಯುತಿಸಂಶ್ಲೇಷಣೆಕ್ರಿಯೆ ನಡೆಸುತ್ತದೆ. ಕೆಳಭಾಗದ ಹೋಳಿನಲ್ಲಿ ಬೇರೊಂದು ಜಾತಿಯ ಸೂಕ್ಷ್ಮವಾದ ಒಳ ಸಸ್ಯಗಳುಳ್ಳ ಸಂದುಗಳಿವೆ. ಇವು ನೀರಿನಲ್ಲಿ ಮುಳುಗಿರುತ್ತವೆ. ಬೇರುಗಳು ಕಾಂಡದಿಂದ ಹುಟ್ಟಿ ನೀರೊಳಗೆ ಜೋತು ಬಿದ್ದಿರುತ್ತವೆ.

	ಎಲೆಗಳುಳ್ಳ ಕವಲುಗಳು ತಾಯಿಗಿಡದಿಂದ ಬೇರ್ಪಟ್ಟು ಹೊಸ ಗಿಡಗಳಾಗಿ ಬೆಳೆದು ನೀರಿನ ಮೇಲ್ಭಾಗವನ್ನೆಲ್ಲ ಮುಚ್ಚುವಂತೆ ಆವರಿಸುತ್ತವೆ. ಇದು ಒಂದು ರೀತಿಯ ವಂಶಾಭಿವೃದ್ಧಿ. ಎರಡನೆಯ ಬಗೆಯ ವಂಶಾಭಿವೃದ್ಧಿಯಲ್ಲಿ ಕೆಲವು ಎಲೆಗಳು ಮೈಕ್ರೋ ಮತ್ತು ಮೆಗಾಸ್ಪೋರೋಕಾರ್ಪ್ ಎಂಬ ವಂಶಾಭಿವೃದ್ಧಿಯ ಅಂಗಗಳಾಗುತ್ತವೆ. ಮೈಕ್ರೋಸ್ಪೋರೋಕಾರ್ಪಿನ ಒಳಾಂಗಗಳಲ್ಲಿ, ಮೈಕ್ರೋಸ್ಪೋರ್‍ಗಳೆಂಬ ಸೂಕ್ಷ್ಮ ಕಣಗಳು ಅಧಿಕ ಸಂಖ್ಯೆಯಲ್ಲಿ ಉತ್ಪಾದನೆಯಾಗುತ್ತವೆ. ಮೈಕ್ರೋಸ್ಪೋರೋಕಾರ್ಪ್ ಮತ್ತು ಮೈಕ್ರೋಸ್ಪೋರ್‍ಗಳಿರುವ ಒಳಾಂಗಗಳು ಬಿರಿದಾಗ ಇವು ಹೊರಕ್ಕೆ ಬರುತ್ತವೆ. ಬಿರಿದ ಮೆಗಾಸ್ಪೋರೊಕಾರ್ಪ್‍ಗೆ ಈ ಕಣಗಳು ಅಂಟಿಕೊಂಡಾಗ ಸೂಕ್ಷ್ಮ ಗಂಡು ಜನನಾಂಗವಾಗಿ ಅತ್ಯಂತ ಸೂಕ್ಷ್ಮವಾದ ಗಂಡು ಜನನ ಕಣಗಳನ್ನು ಉತ್ಪಾದಿಸುತ್ತವೆ. ಬಲಿತ ಮೆಗಾಸ್ಪೋರೋಕಾರ್ಪ್ ಬಿರಿದಾಗ ಒಳಾಂಗದಲ್ಲಿರುವ ಮೆಗಾಸ್ಪೋರ್ ಕಣ ಬೆಳೆದು ತತ್ತಿಯಿರುವ ಆರ್ಕಿಗೋನಿಯಂ ಎಂಬ ಹೆಣ್ಣು ಜನನಾಂಗವನ್ನು ಉತ್ಪಾದಿಸುತ್ತದೆ. ಯಾವುದೋ ಒಂದು ಗಂಡು ಕಣ ಚಲಿಸಿ ತತ್ತಿಯನ್ನು ಸೇರಿ ಗರ್ಭಧಾರಣೆಯಾಗುತ್ತದೆ. ಗರ್ಭ ಧರಿಸಿದ ತತ್ತಿ ಒಡೆದು ಭ್ರೂಣವಾಗುತ್ತದೆ. ಭ್ರೂಣ ಬೆಳೆದು ಎಲೆ, ಕಾಂಡ ಮತ್ತು ಬೇರಿರುವ ಅeóÉೂೀಲ ಸಸ್ಯವಾಗುತ್ತದೆ. ಇದರ ಜೀವನ ಚರಿತ್ರೆಯಲ್ಲಿ ನಿರ್ಲಿಂಗ ಮತ್ತು ಸಲಿಂಗ ಪೀಳಿಗೆಗಳ ಪರ್ಯಾಯಕ್ರಮವಿದೆ. 			
(ಎನ್.ಆರ್.)

	ಇದು ವಾತಾವರಣದಲ್ಲಿನ ನೈಟ್ರೋಜನ್‍ನ ಸ್ಥೀರಿಕರಿಸುವಲ್ಲಿ ಅದನ್ನು ಇತರೆ ಸಸ್ಯಗಳಿಗೆ ಲಭ್ಯವಾಗುವಂತೆ ಮಾಡುವಲ್ಲಿ ಅತ್ಯಂತ ಸಮರ್ಥಶಾಲಿ ಎಂದು ಹೆಸರಾಂತಿರುವುದರಿಂದ ಇದನ್ನು ಬತ್ತದ ಗದ್ದೆಗಳಲ್ಲಿ ಬೆಳೆಯುವ ಪದ್ಧತಿ ಜನಪ್ರಿಯವಾಗಿದೆ.									
(ಪರಿಷ್ಕರಣೆ: ಕೆ.ಬಿ.ಸದಾನಂದ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ